Friday, November 29, 2013
Friday, November 15, 2013
Friday, November 1, 2013
Friday, October 18, 2013
ಕೊಟ್ಟು ಉಳಿಸಿ, ಕಲಿತು ಬೆಳೆಸಿ
ಇನ್ನಾದರೂ ನಾವು ಸಂಸ್ಕೃತದ ಮಹತ್ವ
ಅರಿಯಬೇಕು, ಪುರೋಹಿತರ ಭಾಷೆ ಎಂದು ಜರಿಯುವುದನ್ನು ಬಿಡಬೇಕು. ಸಂಸ್ಕೃತ ಬ್ರಾಹ್ಮಣರ ಬಳಿ
ಬೆಳೆದದ್ದು ಸಾಕು, ದಲಿತ, ಪರಿಶಿಷ್ಟರ ಬಾಯಲ್ಲೂ ನಲಿಯಲಿ, ಎಲ್ಲರ ಭಾಷೆಯಾಗಿ ಉಳಿಯಲಿ. ಪ್ರಜಾಪ್ರಭುತ್ವದಲ್ಲಿ
ಭಾಷೆ, ಆಶಯ,ಆಚರಣೆಗಳಿಗೆ ಮಹತ್ವ ಸಿಗುವುದು
ಸಂಖ್ಯೆಯಿಂದ ಮಾತ್ರ. ಸಂಸ್ಕೃತವನ್ನಾಗಲಿ, ವೇದೋಪನಿಷತ್ತುಗಳನ್ನಾಗಲಿ ಮಡಿವಂತಿಕೆಯಿಂದ ಉಳಿಸಲು
ಸಾಧ್ಯವಿಲ್ಲ. ಕೊಟ್ಟು ಉಳಿಸಬೇಕು. ಕಲಿತು ಬೆಳೆಸಬೇಕು. ಅದು ಇಂದಿನ ಅಗತ್ಯ.
Wednesday, October 9, 2013
ಅಮೆರಿಕ ತಲ್ಲಣದ ಮೂಲವೆಲ್ಲಿ?
(ದಿನಾಂಕ ೧೦-೧೦-೨೦೧೩ ಗುರುವಾರದ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ)
ಅಮೆರಿಕ ಸ್ತಬ್ಧ ಎಂಬ ಸುದ್ಧಿ ಜಗತ್ತಿನ ಎಲ್ಲೆಡೆಯೂ ಒಂದು ಸಂಚಲನ ಉಂಟುಮಾಡಿದೆ. ಜಗತ್ತಿನ
ಹಿರಿಯಣ್ಣನ ಸ್ಥಾನದಲ್ಲಿರುವ ಅಮೆರಿಕ, ತನ್ನ ಕೆಲವು ಸರ್ಕಾರಿ ಸಂಸ್ಥೆಗಳನ್ನು ಒಂದುವಾರ ಕಾಲ ಮುಚ್ಚಿ,
ಸುಮಾರು ಎಂಟು ಲಕ್ಷಜನರನ್ನು ಸಂಬಳವಿಲ್ಲದೇ ರಜೆಯ ಮೇಲೆ ಕಳುಹಿಸಿ, ಇದೀಗ ಎರಡನೇ ವಾರವೂ ಸಮಸ್ಯೆ
ಇತ್ಯರ್ಥವಾಗದೇ ಕುದಿಮೌನದಲ್ಲಿರುವ ಸಂಗತಿ ಅಮೆರಿಕ ಆರ್ಥಿಕತೆಯನ್ನು ನೆಚ್ಚಿಕೊಂಡು ತನ್ನ ಅರ್ಥವ್ಯವಸ್ತೆಯನ್ನು
ರೂಪಿಸಿಕೊಂಡಿರುವ ಭಾರತದಂತಹ ಎಲ್ಲ ದೇಶಗಳಿಗೂ ದಿಗಿಲುಂಟುಮಾಡಿರುವುದು ಸಹಜವೇ. ಅಮೆರಿಕದ ಕಳೆದ
ಒಂದುವಾರದ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಮುಂಚೆ ಕೆಲವೊಂದು ಅಂಶಗಳನ್ನು ನಾವು
ನೆನಪಿಸಿಕೊಳ್ಳಬೇಕಾಗುತ್ತದೆ.
ಅಮೆರಿಕದ ಸಂವಿಧಾನದ ಪ್ರಕಾರ
ಒಂದು ಖಾಯಿದೆ ಅನುಷ್ಠಾನಕ್ಕೆ ಬರಬೇಕಾದರೆ, ಸರ್ಕಾರದ ಯೋಜನೆಗೆ ಹಣ ಬಿಡುಗಡೆಯಾಗಬೇಕಾದರೆ ಅದು
ಅಮೇರಿಕದ ಕಾಂಗ್ರೇಸ್ಸಿನಲ್ಲಿ ಬಹುಮತದ ಅಂಗೀಕಾರವಾಗಬೇಕು. ಅಮೇರಿಕ ಕಾಂಗ್ರೇಸ್ಸೆನ್ನುವುದು 435 ಪ್ರತಿನಿಧಿಗಳನ್ನು ಹೊಂದಿರುವ ’ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’
ಮತ್ತು 100 ಸದಸ್ಯರ ’ಸೆನೆಟ್’ ಒಳಗೊಂಡಿರುವ ಒಂದು ವ್ಯವಸ್ಥೆ. ಅಕ್ಟೋಬರ್ ನಿಂದ ಒಂದು ವರ್ಷಗಳ
ಕಾಲ ಜಾರಿಯಲ್ಲಿರುವ ಅಮೇರಿಕದ ಆಯವ್ಯಯವನ್ನು ಸೆಪ್ಟೆಂಬರ್ ಮೂವತ್ತರ ಒಳಗೆ ಅಮೇರಿಕದ
ಕಾಂಗ್ರೇಸ್ಸು ಅನುಮೋದಿಸಿದರೆ, ಸರ್ಕಾರ ಯಾವ ಅಡೆತಡೆಯೂ ಇಲ್ಲದೇ ನಡೆದುಕೊಂಡು ಹೋಗುತ್ತದೆ. ಆದರೆ
ಇದೀಗ ಬಂದಿರುವ ಸಮಸ್ಯೆಯೆಂದರೆ ಪ್ರಚಲಿತ ವರ್ಷದ ಆಯವ್ಯಯ ಅನುಮೋದಿಸಲು ಕಾಂಗ್ರೇಸ್
ನಿರಾಕರಿಸಿರುವುದು. ಪ್ರತಿಪಕ್ಷವಾದ ರಿಪಬ್ಲಿಕನ್ನರು ಒಬಾಮಾ ಕೇರ್ ಗೆ ತಡೆಗೋಡೆಯಾಗಿ
ನಿಂತಿರುವುದು.
ರಿಪಬ್ಲಿಕನ್ನರ ಈ ಅಸಹಕಾರಕ್ಕೆ,
ಪರಿಣಾಮವಾಗಿ ಸರ್ಕಾರ ಸ್ಥಗಿತಗೊಂಡಿರುವುದಕ್ಕೆ ಮುಖ್ಯ ಕಾರಣ ’ಒಬಾಮಾ ಕೇರ್’ ಎಂಬ ವಿಮಾ ಯೋಜನೆ. ಪೇಶಂಟ್ ಪ್ರೊಟೆಕ್ಷನ್ ಅಂಡ್ ಅಪೋರ್ಡಬಲ್ ಕೇರ್ ಆಕ್ಟ್
ಎಂಬ ಹೆಸರಿನ ಯೋಜನೆ ಪ್ರಸಿದ್ಧವಾಗಿರುವುದೇ ಒಬಾಮಾ ಕೇರ್ ಎಂಬ ಹೆಸರಿನಿಂದ. ಮೂರುವರ್ಷದ ಹಿಂದೆಯೇ
ಅಂದರೆ 2010ರಲ್ಲೇ ಈ ಯೋಜನೆಗೆ ಒಬಾಮಾ ಅಂಕಿತಹಾಕಿ, ಕಾಂಗ್ರೇಸ್ಸಿನಲ್ಲೂ ಅನುಮೋದನೆಗೊಂಡು, ಸರ್ಕಾರಿ
ಖಾಯಿದೆಯಾಗಿ ರೂಪುಗೊಂಡರೂ ಒಬಾಮ್ ಕೇರ್ ಆಗ ಹೆಚ್ಚು ಗೌಜು ಮಾಡಲಿಲ್ಲ. ರಿಪಬ್ಲಿಕನ್ನರು ಇದರ
ವಿರುದ್ಧ ಸಣ್ಣಧನಿಯಲ್ಲಿ ಮಾತನಾಡಿದರಾದರೂ ಈ ಯೋಜನೆಯಲ್ಲಿ ಕೆಲವು ಜನಪ್ರಿಯ ಅಂಶಗಳಿತ್ತಾದ್ದರಿಂದ
ಹೆಚ್ಚು ವಿರೋಧಿಸುವುದಕ್ಕೂ ಹೋಗಲಿಲ್ಲ. ಏಕೆಂದರೆ ಒಬಾಮ ಮತ್ತು ಡೆಮೊಕ್ರಾಟರು ಇದನ್ನು ಬಡವರ ಪರ
ಯೋಜನೆ ಎಂದು ಜಾಹೀರುಮಾಡಲು ಮುಂದಾಗಿದ್ದರು ಮತ್ತು ಇದೇ ಚುನಾವಣೆಯ ಮುಖ್ಯ ವಿಷಯವಾಗಿಬಿಡಬಹುದು
ಎಂಬ ಅನುಮಾನಗಳು ರಿಪಬ್ಲಿಕ್ ಪಾರ್ಟಿಯವರಿಗೂ ಇತ್ತು.
ಒಬಾಮಾ ಈ ಯೋಜನೆಯನ್ನು ಚುನಾವಣಾ
ಪ್ರಚಾರದ ಜಾಹೀರಾತುಗಳಲ್ಲಿ ಹೆಚ್ಚೆಚ್ಚು ಬಳಸಿದ್ದು, ತಮ್ಮ ಭಾಷಣದಲ್ಲಿ ಇದರ ಅನುಕೂಲಗಳನ್ನು
ವಿವರಿಸಿದ್ದು ಹೌದು. ಆದರೆ ಕಳೆದ ಚುನಾವಣೆಯಲ್ಲಿ ಈ ಯೋಜನೆ ಒಬಾಮಾರ ಗೆಲುವಿಗೆ ಅಷ್ಟೇನೂ
ಸಹಕಾರಿಯಾದ ಅಂಶವಲ್ಲ. ಕೆಲವು ಸಂಸ್ಥೆಗಳು ಕೈಗೊಂಡ ಸರ್ವೆಯಿಂದ ಸಾಭೀತಾದ್ದೆಂದರೆ ಈ ಯೋಜನೆಯ
ಬಗ್ಗೆ ಅಸಲಿಗೆ ಹೆಚ್ಚು ಜನರಿಗೆ ಸರಿಯಾದ ಮಾಹಿತಿಯೇ ಇರಲಿಲ್ಲ. ವಿವರ ತಿಳಿದವರೂ ಈ ಯೋಜನೆಯನ್ನು
ಒಪ್ಪಿಕೊಳ್ಳಲಿಲ್ಲ. ಹಾಗಾಗಿ ಜನಾಭಿಪ್ರಾಯದ ಫಲಿತಾಂಶದಲ್ಲಿ ಈ ಯೋಜನೆ ವಿಫಲ ಎಂದೇ ಬಂತು. ಆದರೆ
ಸರಿಯಾದ ಪ್ರತಿಸ್ಪರ್ಥಿಯಿಲ್ಲದ, ಬುಷ್ ವೈಫಲ್ಯ ಕೊಡವಿಕೊಳ್ಳಲಾಗದ ರಿಪಬ್ಲಿಕನ್ ರ ವಿರುದ್ಧ
ಮಾತುಗಾರ ಒಬಾಮ ಗೆದ್ದುಬಿಟ್ಟರು.
ಯಾವಾಗ ಒಬಾಮಾ ಕೇರ್ ಎನ್ನುವುದು
ಚುನಾವಣಾ ವಿಷಯವಾಗಲಿಲ್ಲವೋ, ಹೆಚ್ಚು ಜನರ ಮನಗೆಲ್ಲಲಿಲ್ಲವೋ, ಆದಾಗ್ಯೂ ಒಬಾಮಾ ಆಯ್ಕೆಯಾದರೋ,
ರಿಪಬ್ಲಿಕನ್ನರ ಕುದಿಮೌನ ಇದಕ್ಕೆ ಹಣಬಿಡುಗಡೆಯ ವಿಷಯಬಂದಾಗ ಸ್ಪೋಟಗೊಂಡಿತು. ಅದರ ಪರಿಣಾಮವಾಗಿಯೇ
ಈ ಯೋಜನೆ ಅಮೇರಿಕದ ಆರ್ಥಿಕತೆಗೆ ಹೊರೆ, ಇದಕ್ಕೆ ಹಣ ಪೋಲುಮಾಡುವುದರಲ್ಲಿ ಅರ್ಥವಿಲ್ಲ ಎಂದು ಪವರ್
ಆಫ್ ಪರ್ಸ್ ಅಧಿಕಾರ ಉಪಯೋಗಿಸಿ ರಿಪಬ್ಲಿಕನ್ನರು ಹರತಾಳ ಪ್ರಾರಂಭಿಸಿ ಬಿಟ್ಟರು. ಅದರ
ಪರಿಣಾಮವಾಗಿಯೇ ತೀರಾ ಅಗತ್ಯವಿರದ ಸರ್ಕಾರಿ ಸಂಸ್ಥೆಗಳನ್ನು ಬಾಗಿಲು ಮುಚ್ಚಿ ಸುಮಾರು ಎಂಟು ಲಕ್ಷ
ಜನರನ್ನು ಕಡ್ಡಾಯ ವೇತನರಹಿತ ರಜೆಗೆ ದೂಡಬೇಕಾಯಿತು.
ಅಸಲಿಗೆ, ಒಬಾಮ್ ಕೇರ್ ತೊಡಕಾಗಿರುವುದಾದರೂ ಯಾಕೆ? ಈ
ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸರಳವಲ್ಲ. ಅಮೇರಿಕದಲ್ಲಿ ಆರೋಗ್ಯ ಸೇವೆಗಳು
ಭಾರತದಂತೆ ಅಗ್ಗವಲ್ಲ. ಅಮೇರಿಕದ ಜನಜೀವನ ಮುಖ್ಯವಾಗಿ ಅವಲಂಭಿತವಾಗಿರುವುದೇ ಕ್ರೆಡಿಟ್ ಕಾರ್ಡ್
ಮತ್ತು ಇನ್ಸೂರೆನ್ಸ್ ಗಳ ಮೇಲೆ. ಅಮೇರಿಕದ ಆರ್ಥಿಕತೆಯ ಮೇಲೂ ಇವೆರಡು ಹಿಡಿತ ಹೊಂದಿವೆ. ಆರೋಗ್ಯ
ಸೇವೆ ದುಬಾರಿಯಾಗಿರುವುದರಿಂದ, ಆರೋಗ್ಯ ವಿಮೆಯಿರದವರಿಗೆ ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳು
ಕಾಡಿದರೂ ನೂರಾರು ಡಾಲರ್ ಗಳು ಕೈಬಿಟ್ಟು ಹೋಗುತ್ತದೆ. ಹಾಗಾಗಿಯೇ ಎಲ್ಲರೂ ಕನಿಷ್ಠ ಸೇವೆಯನ್ನಾದರೂ
ಒದಗಿಸುವ ವಿಮಾ ಯೋಜನೆಯನ್ನು ಹೊಂದಿರುತ್ತಾರೆ.
ಹಾಗಂತ ವಿಮೆಯಿಲ್ಲದವರೂ ಇಲ್ಲವೆಂದಲ್ಲ. ಶೇಕಡ 15-20 ಜನ ಇಂದಿಗೂ ಅಮೇರಿಕದಲ್ಲಿ ಆರೋಗ್ಯ ವಿಮಾ
ವಂಚಿತರಿದ್ದಾರೆ. ಇಂತವರನ್ನು ಗಮನವಿಟ್ಟುಕೊಂಡೆ ನಾವು ಒಬಾಮ ಕೇರ್ ರೂಪಿಸಿದ್ದೇವೆ ಎನ್ನುವುದು
ಒಬಾಮರ ಅಭಿಮತ.
ಒಬಾಮಾ ಸ್ವತಃ ವಿವರಿಸುವಂತೆ
ಇದರಲ್ಲಿ ಅನೇಕ ಪ್ರಯೋಜನಕಾರಿ ಅಂಶಗಳಿವೆ. ಈಗಾಗಲೇ ವಿಮೆ ಹೊಂದಿರುವ ಶೇಕಡ 85 ಜನರಿಗೆ ಹೆಚ್ಚು ಆಯ್ಕೆಗಳು ಸಿಗುತ್ತವೆ. ಈಗಿರುವ ಅನೇಕ
ವಿಮಾ ಯೋಜನೆಗಳಲ್ಲಿ ಈ ಮೊದಲೇ ಆಸ್ತಮಾ, ಅಲರ್ಜಿ, ಬೆನ್ನುನೋವು ತರಹದ ಸಮಸ್ಯೆಗಳಿದ್ದರೆ ಅವುಗಳ
ಚಿಕಿತ್ಸೆ ವಿಮೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಅದಕ್ಕೆ ರೋಗಿಯೇ ಹಣ ಪಾವತಿಸಬೇಕಾಗುತ್ತದೆ.
ಆದರೆ ಒಬಾಮ್ ಕೇರ್ ನಲ್ಲಿ ಇಂತಹ, ಈಗಾಗಲೇ ಇರುವ ಸಮಸ್ಯೆಗಳನ್ನೂ ವಿಮಾ ವ್ಯಾಪ್ತಿಯಲ್ಲಿ
ತರಲಾಗಿದೆ. 26 ವರ್ಷಕ್ಕಿಂತ ಕೆಳಗಿನವರಿಗೆ ಪೋಷಕರ ಯೋಜನೆಯಲ್ಲೇ ಪಾಲುದಾರರಾಗುವ ಅಂಶ ಒಳಗೊಂಡಿರುವುದರಿಂದ
ಪ್ರತ್ಯೇಕ ವಿಮೆಗೆ ಹಣ ತುಂಬುವ ಅಗತ್ಯವಿಲ್ಲ. ಇಂತಹ ಸುಮಾರು ಮೂರು ಲಕ್ಷ ಯುವಕ ಯುವತಿಯರು ಪೋಷಕರ
ವಿಮೆಯಲ್ಲೇ ಪಾಲುದಾರರಾಗುವುದರಿಂದ ಹಣ ಉಳಿತಾಯವಾಗುತ್ತದೆ. ಮುಖ್ಯವಾಗಿ ಈಗಾಗಲೇ ವಿಮೆಯಿರದವರು
ಅಂದರೆ ಸುಮಾರು ನಾಲ್ಕು ಕೋಟಿ ಜನರಿಗೆ ಕಡಿಮೆ ದರದಲ್ಲಿ, ಉತ್ತಮ ಆರೋಗ್ಯ ಸೇವೆಯನ್ನು ಈ ಯೋಜನೆ
ಒದಗಿಸುತ್ತದೆ.
ಇದು ಈ ಯೋಜನೆಯ
ಪ್ರಮುಖಾಂಶವಾದರೆ, ಇದರಿಂದ ಕೆಲವು ಅನುಕೂಲಗಳೂ ಇವೆ. ಸಾಮಾನ್ಯವಾಗಿ ವಾರಕ್ಕೆ ನಲವತ್ತು ತಾಸು
ಉದ್ಯೋಗ ಮಾಡುವವರಿಗೆ ಕಂಪನಿಗಳೇ ವಿಮೆಯನ್ನು ಒದಗಿಸುತ್ತವೆ. ಆದರೆ ಸ್ವಯಂ ಉದ್ಯೋಗಿಗಳು, ನಿರುದ್ಯೋಗಿಗಳು,
ಕಾರಣಾಂತರಗಳಿಂದ ಉದ್ಯೋಗ ಕಳೆದುಕೊಂಡವರು ತಾವೇ ಹಣತೆತ್ತು ಯೋಜನೆ ಕೊಂಡುಕೊಳ್ಳಬೇಕಾಗುತ್ತದೆ.
ಅಂತವರಿಗೆ ಈಗಿರುವ ಯೋಜನೆಗಳು ದುಬಾರಿಯೇ. ಹೀಗಾಗಿ ಒಬಾಮಾ ಕೇರ್ ಜಾರಿಯಾದರೆ ಇಂತವರು ಸುಲಭವಾಗಿ
ವಿಮೆ ಪಡೆಯಬಹುದು ಮತ್ತು ಕಡಿಮೆ ಬೆಲೆಗೆ ವಿಮೆ ಸಿಗುವುದರಿಂದ ಇದು ಹೆಚ್ಚು ಜನರನ್ನು ಸ್ವಯಂ
ಉದ್ಯೋಗಕ್ಕೆ ಪ್ರೇರೇಪಿಸಿ ಉದ್ಯಮಶೀಲತೆಯನ್ನು ಬೆಳೆಸುತ್ತದೆ. ಅದು ಅಮೇರಿಕದ ಆರ್ಥಿಕತೆಗೂ ಲಾಭಕರ
ಎನ್ನುವುದು ಒಬಾಮಾ ವಾದ.
ಊಹುಃ ಇದಿಷ್ಟೇ ಅಲ್ಲ. ಇದರ
ಹಿಂದೆ ಕೆಲವು ಆಕ್ಷೇಪಾರ್ಹ ಅಂಶಗಳೂ ಇವೆ. ಒಬಾಮಾ ಕೇರ್ ಉತ್ತಮ ಸೇವೆಯನ್ನೇನೋ ಸರ್ವರಿಗೂ
ಒದಗಿಸುತ್ತದೆ. ಆದರೆ ಸೇವೆಯ ಗುಣಮಟ್ಟದಂತೆ ವಿಮಾ ಶುಲ್ಕ ಸಮಾನವಾಗಿಲ್ಲ. ಅದಕ್ಕೆ ಆದಾಯದ
ಮಿತಿಯಿದೆ. ವಾರ್ಷಿಕ ನಲವತ್ತು ಸಾವಿರದ ಒಳಗಿರುವವರಿಗೆ, ನಲವತ್ತರಿಂದ ಅರವತ್ತು, ಅರವತ್ತರಿಂದ
ನೂರು ಸಾವಿರ ಡಾಲರ್ ಆದಾಯ ಮತ್ತು ಮೇಲ್ಪಟ್ಟು ಹೀಗೆ ಆದಾಯದ ಮೇಲೆ ವಿಮೆಯ ವೆಚ್ಚ ಎರಡು, ಮೂರು
ನಾಲ್ಕುಪಟ್ಟಾಗುತ್ತಾ ಹೋಗುತ್ತದೆ. ಒಂದೇ ಸೇವೆಯ ಗುಣಮಟ್ಟಕ್ಕೆ ಒಬ್ಬ ಹೆಚ್ಚು, ಮತ್ತೊಬ್ಬ ಕಡಿಮೆ
ಶುಲ್ಕ ತುಂಬುವುದು ಎಲ್ಲರಿಗೂ ಒಪ್ಪಿತವಾಗುವುದಿಲ್ಲ. ಇನ್ನು ಉದ್ಯಮಶೀಲತೆ ಬೆಳೆಸುತ್ತದೆ ಎಂಬುದು
ಒಂದು ದೃಷ್ಠಿಯಾದರೆ, ಕಂಪನಿಗಳು ಈ ಯೋಜನೆ ಬಳಸಿ ಪೂರ್ಣಾವಧಿ ನೌಕರಿಗಿಂತ, ಅಲ್ಪಾವಧಿ ನೌಕರಿಗೇ
ಹೆಚ್ಚು ಪ್ರಾಶಸ್ತ್ಯ ಕೊಡಬಹುದು. ಇದರಿಂದ ಕಂಪನಿಗಳಿಗೆ ಲಾಭವಾಗಿ, ನಿರುದ್ಯೋಗಕ್ಕೆ ಎಡೆ
ಮಾಡಿಕೊಡಬಹುದು ಎಂಬುದು ಇದನ್ನು ವಿರೋಧಿಸುವವರ ವಾದ.
ಈ ಪರ ವಿರೋಧದ ವಾದಗಳೇನೇ ಇರಲಿ,
ಯೋಜನೆ ಜಾರಿಯಾಗಿ, ಅದರಲ್ಲಿ ಭಾಗಿಗಳಾಗದೇ ಇದು ಉಪಯೋಗಕಾರಿಯೇ ಇಲ್ಲವೇ ಎಂದು ತೀರ್ಮಾನಿಸುವುದು ಜನರಿಗೆ
ಕಠಿಣವೇ. ಸರ್ಕಾರ ತನ್ನ ಯೋಜನೆಯನ್ನು ಹೆಚ್ಚೇ ಹೊಗಳಿದರೆ, ವಿರೋಧ ಪಕ್ಷಗಳು ಕೊಂಚ ಉತ್ಪ್ರೇಕ್ಷೆಯಲ್ಲೇ
ಅದನ್ನು ತೆಗಳುತ್ತವೆ.ಜಗತ್ತಿನ ಹಿರಿಯಣ್ಣ ಎನಿಸಿಕೊಂಡ ಅಮೆರಿಕದಲ್ಲಿ, ಎಲ್ಲರಿಗೂ ಕೈಗೆಟುಕಬಲ್ಲ,
ತೀರಾ ಅನಿವಾರ್ಯವಾದ ಆರೋಗ್ಯ ವಿಮಾ ಯೋಜನೆ ಇಲ್ಲ ಎನ್ನುವುದು ಬಹುವರ್ಷಗಳಿಂದ ಚರ್ಚೆಯಾಗುತ್ತಿದ್ದ
ವಿಷಯ. ಈ ಹಿಂದೆ ಬಿಲ್ ಕ್ಲಿಂಟನ್ ಇದರ ಸುಧಾರಣೆಗೆ ಕೈ ಹಾಕಿದ್ದರಾದರೂ ಅದು ನೆನೆಗುದಿಗೆ
ಬಿದ್ದಿತ್ತು ಮತ್ತು ಈ ಹಿಂದಿನ ಚುನಾವಣೆಯಲ್ಲಿ ಎರಡೂ ಪಕ್ಷಗಳು ವಿಮಾ ಯೋಜನೆಯ ಅಗತ್ಯದ ಬಗ್ಗೆ
ಚರ್ಚಿಸಿದ್ದವು. ರಿಪಬ್ಲಿಕನ್ನರೂ ಒಳ್ಳೆಯ ಯೋಜನೆ ಬೇಕೆಂಬುದನ್ನು ಒಪ್ಪಿಕೊಂಡಿದ್ದರು.
ಒಟ್ಟಿನಲ್ಲಿ, ಕೆಲವು
ಲೋಪದೋಷಗಳನ್ನು ಸರಿಪಡಿಸಿಕೊಂಡರೆ ಒಬಾಮಾ ಕೇರ್ ಅಮೆರಿಕಾಕ್ಕೆ ತೀರಾ ಅಗತ್ಯವಾಗಿ ಬೇಕಾದ
ಯೋಜನೆಯೇ. ಈ ಯೋಜನೆಯನ್ನು ಉತ್ತಮ ಪಡಿಸುವಲ್ಲಿ ರಿಪಬ್ಲಿಕನ್ನರೂ ಸಲಹೆ ಸೂಚನೆ ಕೊಡಬಹುದಿತ್ತು. ಆದರೆ
ಹಾಗಾಗುತ್ತಿಲ್ಲ. ಜನಪರ ಯೋಜನೆಯೊಂದು ಎರಡು ಪಕ್ಷಗಳ ರಾಜಕೀಯ ಪ್ರತಿಷ್ಠೆಯ ವಿಷಯವಾಗಿ, ಲಾಭದಾಯಕ
ವಿಮಾ ಕಂಪನಿಗಳ ರಾಜಕೀಯ ದಾಳವಾಗಿ ಬಳಕೆಯಾಗುತ್ತಿರುವುದು ದುರಂತ. ಮುಖ್ಯವಾಗಿ ಒಬಾಮಾ ಕೇರ್ ಸಮಸ್ಯೆಯಾಗಿರುವುದೇ
ಇದು ’ಒಬಾಮಾ’ಕೇರ್ ಎಂಬ ಕಾರಣಕ್ಕೆ. ಬಹುಶಃ ರಿಪಬ್ಲಿಕನ್ನರೇ ಇಂತಹದೊಂದು ಯೋಜನೆ ತಂದಿದ್ದರೆ ಡೆಮೊಕ್ರಟಿಕ್
ಪಕ್ಷವೂ ಒಪ್ಪುತ್ತಿರಲಿಲ್ಲವೇನೋ! ಜನರ ಸಮಸ್ಯೆ ಸಮಸ್ಯೆಯಾಗೇ ಉಳಿದರೂ ಅಡ್ಡಿಯಿಲ್ಲ. ಸಮಸ್ಯೆ
ನಿವಾರಣೆಯ ಕೀರ್ತಿ ಇನ್ನೊಂದು ಪಕ್ಷಕ್ಕೆ ದಕ್ಕುವುದನ್ನು ಯಾವ ಪಕ್ಷವೂ ಸಹಿಸುವುದಿಲ್ಲ. ಕೀರ್ತಿಯ
ಬೆನ್ನತ್ತುವುದು, ಪರರ ಕೀರ್ತಿ ಕಂಡು ಕರುಬುವುದು, ಮಾನವ ಸಹಜ ಗುಣ. ಅಮೇರಿಕದ ರಾಜಕೀಯ ಇದರಿಂದ
ಹೊರತಲ್ಲ.
Subscribe to:
Posts (Atom)




