Friday, August 29, 2014

ಗಣೇಶ ಬಂದ… ಪುಸ್ತಕ ತಂದ..

ನಮ್ಮ ಗಣಪ ಹಾಗೆಯೇ. ಆತ ಎಂದಿಗೂ ಎಲ್ಲಿಗೂ ಒಬ್ಬನೇ ಬರುವವನೇ ಅಲ್ಲ. ಜೊತೆಗೆ ಹಾವು, ಇಲಿ ಇತ್ಯಾದಿ ತನ್ನ ಪರಿವಾರವಂತೂ ಇರಲೇಬೇಕು. ಕೈಗಳಲ್ಲಿ ಮೋದಕ ಕಡ್ಡಾಯ. ಆನೆ ಸೊಂಡಿಲಿಗೆ ನೈವೇದ್ಯದ ಘಮಘಮ ಇದ್ದರಷ್ಟೇ ಅವನು ಕೊಂಚ ಹೊತ್ತು ಕೂರುವುದು. ಆರತಿ, ಧೂಪ, ಅಗರಬತ್ತಿ, ಗಂಧಾಕ್ಷತೆ ಊಹುಃ ಅದೇನಿದ್ದರು ನಿಮ್ಮ ಭಕ್ತಿಗೆ, ನನ್ನ ಪ್ರೀತಿಗೆ ಕಡುಬು, ಮೋದಕ, ಕಜ್ಜಾಯವಷ್ಟೇ ಎನ್ನುತ್ತಾ ಪಿಳಿಪಿಳಿ ಕಣ್ಣು ಮಿಟುಕಿಸುವವನು ಗಣೇಶ. ಬಾಲ್ಯದಿಂದಲೂ ಬದುಕಿಗೆ ಸಂಭ್ರಮ ತಂದವನು ತುಂಟ ಗಣಪನೇ. ತಿಂಗಳ ಮುಂಚೆಯೇ ಚಂದಾ ವಸೂಲಿ, ವಾರವಿದ್ದಾಗಲೇ ಪೆಂಡಾಲಿಗೆ ತಯಾರಿ, ವಿವಿಧ ಸ್ಪರ್ಧೆಗಳು, ಕಾರ್ಯಕ್ರಮಗಳೆನ್ನುತ್ತಾ ಮದ್ದೂರಿನ ಕೋಟೆ ಸರ್ಕಲ್ಲಿನಲ್ಲಿ ನಾವು ಮೆರೆದಾಡಿದ್ದು ಈ ಗೆಳೆಯನಿಂದಲೇ. ದೇವರೂ ಆಗಿ, ಏಕವಚನಕ್ಕೆ ಸುಲಭಕ್ಕೆ ಸಿಗುವ ಗೆಳೆಯನೂ ಆಗಿ ಸಂಕಷ್ಟಗಳು ಬಂದಾಗಲೆಲ್ಲಾ ನಾಲ್ಕಾಣೆಯ ಹರಕೆಗೆ, ತೆಂಗಿನಕಾಯಿ ಸೇವೆಗೆ, ಗಣಹೋಮದ ಪಂಚಕಜ್ಜಾಯಕ್ಕೆ ಆನೇಗುಡ್ಡೆಯಿಂದ, ಹಟ್ಟಿಅಂಗಡಿಯಿಂದಲೇ ಒಲಿಯುವ ಗಣಪ ಇಂದು ಮನೆಗೆ ಬಂದಿದ್ದಾನೆ. ಊಹುಃ ತಿಂಡಿ ತಿನಿಸುಗಳಷ್ಟೇ ಅಲ್ಲ, ಎರಡು ಪುಸ್ತಕಗಳನ್ನೂ ತಂದಿದ್ದಾನೆ. ಲೋಕಾರ್ಪಣೆಯ ಹೊಣೆಯೂ ಅವನದೇ. ಇದೋ ಅವನು ತಂದ ’ಪರದೇಶಿ ಪರಪಂಚ’ ಮತ್ತು ’ನಾಸ್ತಿಕ ರಾಜ, ಎಡವಟ್ಟರ ತುತ್ತೂರಿ’ ನಿಮಗಾಗಿ..
ಪ್ರತಿಗಾಗಿ ಸಂಪರ್ಕಿಸಿ – 9480088960